Good News

ಮತಗಳಿಕೆಯ ನಾಮಕರಣಗಳಿಗೆ ಏನಾದರೂ ಮಾನದಂಡವಿದೆಯೇ? Claim

0 / 5
Compare Add to favorites Print

ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಕೇಂದ್ರ ಸರ್ಕಾರಗಳು ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ.

ಅವುಗಳಿಗೆ ಅಧಿಕಾರರೂಢ ರಾಜಕೀಯ ಪಕ್ಷಗಳು ತಂತಮ್ಮ ಪಕ್ಷಕ್ಕೆ ಸೇರಿದ ಧುರೀಣರ ಹೆಸರನ್ನಿಟ್ಟು ಯೋಜನೆಗಳನ್ನು ಜಾರಿಗೆ ತರುವ ಪರಿಪಾಠವಿದೆ. ಉದಾಹರಣೆಗೆ ವಾಜಪೇಯಿಶ್ರೀ ಆರೋಗ್ಯ, ಮೊರಾರ್ಜಿ ಶಾಲೆ, ಇಂದಿರಾ ಆವಾಸ್, ಇಂದಿರಾ ಕ್ಯಾಂಟೀನ್ ಇತ್ಯಾದಿ ಇತ್ಯಾದಿ. (ಮುಂದೊಂದು ದಿನ ಮೋದಿ ಗ್ಯಾಸ್, ರಾಹುಲ್ ಸ್ಟೋ, ಲಾಲು ಗೌ, ಮಮತಾ ದೂಧ್ ಬಂದ್ರೂ ಅಚ್ಚರಿಯಿಲ್ಲ!)

ಇಂಥ ನಾಮಕರಣಗಳಿಗೆ ಏನಾದರೂ ಮಾನದಂಡವಿದೆಯೇ?  ಮತಗಳಿಕೆಯೇ ಏಕಂಶ ಸೂತ್ರ ಇದರ ಹಿಂದಿರುವುದು ಸ್ಪಷ್ಟ. ಹೋಗಲಿ ಇಲ್ಲಾದರೂ ಸಾಮಾಜಿಕ ನ್ಯಾಯ ಪರಿಪಾಲನೆಯಾಗುತ್ತಿದೆಯೇ ಎಂದು ಕೇಳಲೇಬೇಕಾಗುತ್ತದೆ. ಕೇವಲ ಈ ಮೇಲಿನವರು ರಾಷ್ಟ್ರ ನಾಯಕರೇ? ಪ್ರಾದೇಶಿಕ ಧುರೀಣರು, ಖ್ಯಾತನಮಾಂಕಿತರು, ವಿದ್ವಾಂಸರು ಇಂಥವರನ್ನು ಪರಿಗಣಿಸುವುದೇ ಇಲ್ಲ. ಉದಾಹರಣೆಗೆ ಷರೀಫರು, ಬಸವಣ್ಣ, ಕನಕ – ಪುರಂದರ, ಸರ್ವಜ್ಞ, ವಿಶ್ವೇಶ್ವರಯ್ಯ, ಕುವೆಂಪು, ಅರಸು, ತಿಮ್ಮಕ್ಕ, ನಿಜಲಿಂಗಪ್ಪ, ಕೆಂಪೇಗೌಡ, ಚೆನ್ನಮ, ಅಬ್ಬಕ್ಕ ಇತ್ಯಾದಿ. ಅವರು ಹೇಗೆ ರಾಷ್ಟ್ರ ನಾಯಕರೋ ಇವರು ಹಾಗೆಯೇ ರಾಷ್ಟ್ರ ನಾಯಕರೇ ಎಂದು ನಮ್ಮ ರಾಜಕೀಯ ಪಕ್ಶಗಳಿಗೆ ಅನ್ನಿಸುವುದೇ ಇಲ್ಲ. ಕಾರಣ ಸ್ಪಷ್ಟ ಈ ಹೆಸರುಗಳಾವುವು ಮತ ಸೆಳೆಯುವುದಿಲ್ಲವಲ್ಲ?

 

 

ಇನ್ನೊಂದು ಸಂಗತಿ ನೆನಪಿರಲಿ, ಈ “ಹೈ ಕಮಾಂಡ್” ಎನ್ನುವ ಭೂತವನ್ನು ಹೆತ್ತಿದ್ದೇ ಈಗಿನ ಕಾಂಗ್ರೆಸ್ ಪಕ್ಷ. ಲಾಗಾಯ್ತಿನಿಂದ     ಎಲ್ಲ ‘ರಾಷ್ಟ್ರೀಯ'(?) ಪಕ್ಷಗಳು ಈ ದಾಸ್ಯ ಸಂಪ್ರದಾಯವನ್ನು ಚಾಚೂ ತಪ್ಪದೇ ಪಾಲಿಸುತ್ತ ಬಂದಿವೆ. ಈ ಹೈ ಕಮಾಂಡ್ ಓಲೈಸುವ ಭರದಲ್ಲಿ ನರಸತ್ತವರಂತೆ ನಮ್ಮ ‘ಪ್ರಾದೇಶಿಕ ಧುರೀಣರು’ ‘ಅನ್ಯರ’ ಹೆಸರನ್ನು ವಿಜೃಂಭಿಸುತ್ತಿವೆ. ಈ ‘ಅನ್ಯರು’ ಎಂಬ ಪದವನ್ನು ನಾನು ತುಂಬಾ ಪ್ರಜ್ಞಾಪೂರ್ವಕವಾಗಿಯೇ ಉಪಯೋಗಿಸಿದ್ದೇನೆ. ಎಲ್ಲ ರಾಜ್ಯಗಳು ತಂತಮ್ಮ ಪಾಲಿನ ತೆರಿಗೆಯನ್ನು ಕೇಂದ್ರಕ್ಕೆ ಸಲ್ಲಿಸುತ್ತಾ ಬಂದಿದ್ದರೂ ಕೇಂದ್ರ ಸರ್ಕಾರ ತೆರಿಗೆ ಮೊತ್ತವನ್ನು ಕಪ್ಪು ಕಾಣಿಕೆ ಥರ ಪಡೆದುಕೊಳ್ಳುವಂತೆ ವರ್ತಿಸುತ್ತಿದೆ. ಅಥವಾ ಕೊಡುವವರು ಹಾಗೆ ಕೊಡುತ್ತಾರೆಂದು ಬೇಕಾದರೆ ಭಾವಿಸೋಣ. ಹೇಗಾದರೂ ಅರ್ಥ ಒಂದೇ ತಾನೇ? ಸ್ವಲ್ಪ ಹಿಂದಕ್ಕೆ ಹೋಗಿ ಜ್ಞಾಪಿಸಿಕೊಳ್ಳಿ. ರಾಜಕೀಯ ಮುತ್ಸದ್ದಿ ಪಿಜಿಆರ್ ಸಿಂಧಿಯಾ ಮಾಯಾವತಿಯನ್ನು, ಬಂಗಾರಪ್ಪ ಮುಲಾಯಂ ನನ್ನು ರಾಜ್ಯಕ್ಕೆ ಕರೆತಂದು ಅವರನ್ನು ವಿಜೃಂಭಿಸಲು ಯತ್ನಿಸಿ ಮಣ್ಣು ಮುಕ್ಕಿದ್ದು ಈಗ ಇತಿಹಾಸ.

ಇನ್ನಾದರೂ ನಮ್ಮ ‘ಪ್ರಾದೇಶಿಕ’ ಪಕ್ಷಗಳು ಹಾಗೂ ಧುರೀಣರು ಮೈ ಮುರಿದು ಸೆಟೆದು ಎದ್ದು ನಿಲ್ಲಲಿ. ತಮ್ಮ ಹಾಗೂ ನಮ್ಮ ಆತ್ಮ ಗೌರವ ಕಾಪಾಡಲಿ. ಆಗ ಅಸ್ಮಿತೆ ಎನ್ನುವ ಪದಕ್ಕೂ ಅಸ್ಮಿತೆ ಬಂದೀತು!

ಕೊನೆಯಲ್ಲಿ ಒಂದು ಮಾತು: ಈ ದಿಸೆಯಲ್ಲಿ ಯೋಚಿಸುತ್ತ ಹೋದಾಗ ಕನ್ನಡವೂ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳೂ ರಾಷ್ಟ್ರಭಾಷೆಗಳೇ ಎಂಬುದು ತಂತಾನಾಗಿಯೇ ಗೋಚರಿಸುತ್ತದೆ.

ಅನಿಸಿಕೆ ದೀರ್ಘವಾದುದಕ್ಕೆ ಕ್ಷಮೆಯಿರಲಿ.

  • Person Ravindra Munnolimath

Post New Review

Continue READING

Random News articles from our database.